"ಡಿವಿಜಿಯವರ ಬಗ್ಗೆ ಎಷ್ಟು ಮಾತನಾಡಿದರೂ ಕಡಿಮೆಯೇ" ಹೀಗೆ ಸಂತಸದಿಂದ ಉದ್ಗರಿಸಿದವರು ನಾಡಿನ ಹೆಮ್ಮೆಯ ಹಾಗೂ ಪ್ರಖ್ಯಾತ ಹೃದ್ರೋಗ ತಜ್ಞರಾದ, ಬೆಂಗಳೂರಿನ ಜಯದೇವ ಹೃದ್ರೋಗ ಕೇಂದ್ರದ ನಿರ್ದೇಶಕರಾದ ಡಾ. ಸಿ.ಎನ್. ಮಂಜುನಾಥ್ ರವರು.
ತುಮಕೂರಿನ ಟಿ.ಎಚ್.ಎಸ್. ಆಸ್ಪತ್ರೆಗೆ ಮತ್ತು ಜೀವಾ ಎಂ.ಆರ್.ಐ. ಸೆಂಟರ್ ಗೆ ದಿನಾಂಕ 14-09-2019 ಮಂಗಳವಾರ ಅವರು ಭೇಟಿ ನೀಡಿದ್ದಾಗ ಈ ಆಸ್ಪತ್ರೆ ಸಮೂಹದ ಮುಖ್ಯಸ್ಥರಲ್ಲೊಬ್ಬರಾದ ಡಾ. ಟಿ.ಎಸ್. ವಿಜಯ್ ಕುಮಾರ್ ರವರು ನನ್ನನ್ನು ಡಾ. ಮಂಜುನಾಥ್ ರವರಿಗೆ ಪರಿಚಯಿಸುತ್ತ, "ಇವರು ತುಮಕೂರಿನಲ್ಲಿ ಕಳೆದ 75 ತಿಂಗಳುಗಳಿಂದ ಡಿ.ವಿ. ಗುಂಡಪ್ಪರವರ ಸ್ಮರಣೆಯಲ್ಲಿ "ಡಿವಿಜಿ ನೆನಪು" ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ" ಎಂದು ಹೇಳಿದರು.
ಆಗ ಕುತೂಹಲದಿಂದ ಹಾಗೂ ಅತ್ಯಂತ ಸೌಜನ್ಯದಿಂದ ಕಾರ್ಯಕ್ರಮದ ಬಗ್ಗೆ ಕೇಳಿ ತಿಳಿದುಕೊಂಡ ಡಾ.ಮಂಜುನಾಥ್ ರವರು ಮೇಲಿನಂತೆ ಉದ್ಗರಿಸಿದರು.
"ನಮ್ಮ ಕಾರ್ಯಕ್ರಮಕ್ಕೆ ತಾವೂ ಒಮ್ಮೆ ದಯಮಾಡಿ ಆಗಮಿಸಬೇಕು" ಎಂದು ನಾನು ಕೇಳಿಕೊಂಡಾಗ ಅವರು "ಖಂಡಿತವಾಗಿ ಬರುತ್ತೇನೆ" ಎಂದು ಖುಷಿಯಿಂದಲೇ ಪ್ರತಿಕ್ರಿಯಿಸಿದರು. ಅವರೊಂದಿಗಿನ ಮಾತುಕತೆ ಮನಸ್ಸನ್ನು ಮುದಗೊಳಿಸಿತು. ಯಾವುದೇ ಬಿಗುಮಾನವಿಲ್ಲದೆ ಎಲ್ಲರೊಂದಿಗೆ ಬೆರೆಯುವ ಅವರ ಸರಳತೆ, ಸೌಜನ್ಯಯುತ ನಡವಳಿಕೆ ಗಮನ ಸೆಳೆಯಿತು.
ಭೇಟಿಯ ಸಂದರ್ಭದಲ್ಲಿ ಅಲ್ಲಿದ್ದ ಗಣ್ಯರೊಡನೆ ಅನೌಪಚಾರಿಕವಾಗಿ ಡಾ.ಮಂಜುನಾಥ್ ರವರು ಮಾತನಾಡುತ್ತ "ಬುದ್ಧಿವಂತಿಕೆಗಿಂತ ಹೃದಯವಂತಿಕೆ ಮುಖ್ಯ. ಕೌಶಲ್ಯಕ್ಕಿಂತ ಕರುಣೆ ಮುಖ್ಯ, ದೃಷ್ಟಿಗಿಂತ ದೂರದೃಷ್ಟಿ ಮುಖ್ಯ" ಎಂದು ಹೇಳಿದ್ದು, ಅಲ್ಲಿದ್ದ ಎಲ್ಲರೂ ಮತ್ತೊಮ್ಮೆ, ಮಗದೊಮ್ಮೆ ಆಲೋಚಿಸುವಂತೆ ಮಾಡಿತು. ಇಲ್ಲಿನ ಚಿತ್ರದಲ್ಲಿ ತುಮಕೂರು ನಗರದ ಖ್ಯಾತ ಉದ್ಯಮಿಗಳಾದ ಶ್ರೀಮತಿ ಆಶಾ ಪ್ರಸನ್ನಕುಮಾರ್ ರವರು, ಎಸ್.ಎಸ್.ಐ.ಟಿ.ಯ ಆಗಿನ ಪ್ರಾಚಾರ್ಯರಾಗಿದ್ದ ಡಾ.ವೀರಯ್ಯರವರು, ಟಿ.ಎಚ್.ಎಸ್.ಆಸ್ಪತ್ರೆಯ ಡಾ.ಟಿ.ಎಸ್.ವಿಜಯಕುಮಾರ್ ರವರು ಮೊದಲಾದ ಗಣ್ಯರುಗಳನ್ನು ಕಾಣಬಹುದು.
ಈ ಅವಿಸ್ಮರಣೀಯ ಭೇಟಿಗೆ ಅವಕಾಶ ಕಲ್ಪಿಸಿದ ಟಿ.ಎಚ್.ಎಸ್. ಆಸ್ಪತ್ರೆಯ ಮುಖ್ಯಸ್ಥರೂ, ಆತ್ಮೀಯರೂ ಆದ ಡಾ. ಟಿ.ಎಸ್. ವಿಜಯಕುಮಾರ್ ಅವರಿಗೆ ಧನ್ಯವಾದಗಳು.
No comments:
Post a Comment